ಉಗಾಂಡದ ಇತಿಹಾಸ
	
1850ರ ಹಿಂದಿನ ಉಗಾಂಡದ ಇತಿಹಾಸದ ಬಗ್ಗೆ ಲಿಖಿತ ದಾಖಲೆಗಳೇನೂ ಇಲ್ಲ. ವಿಕ್ಟೋರಿಯ ಸರೋವರದ ಉತ್ತರ ಭಾಗದಲ್ಲಿ ಬಲು ಹಿಂದಿನಿಂದಲೂ ಬ್ಯಾಂಟುಗಳು ವಾಸಿಸುತ್ತಿದ್ದಿರಬೇಕು. ನೈಲ್ ಪ್ರದೇಶವಾಸಿಗಳು (ನೈಲೋಟಿಕ್) ಇಲ್ಲಿಗೆ ಬಂದು ಬ್ಯಾಂಟುಗಳೊಂದಿಗೆ ಬೆರೆತರು. ಬಹುಶಃ 15ನೆಯ ಶತಮಾನದಲ್ಲಿ ಪಶ್ಚಿಮ ಉಗಾಂಡಕ್ಕೆ ಹಿಮ ಬುಡಕಟ್ಟಿನ ಜನ ಬಂದರು. ಈ ಜನದ್ದು ಎತ್ತರ ನಿಲುವು. ಬಿಳಿಯ ತೊಗಲು, ಆಕರ್ಷಕ ರೂಪು. ಈ ದನಗಾಹಿಗಳು ಇಲ್ಲಿಗೆ ಬಂದೊಡನೆಯೆ ಒಡೆಯರಂತೆ ವರ್ತಿಸಿ ಇಲ್ಲಿನ ಮೂಲನಿವಾಸಿ ರೈತ ಜನರನ್ನು ಆಳುಗಳಂತೆ ಕಂಡರು. ಅನಂತರ ಬಂದ ನೈಲ್ ವಾಸಿಗಳಿಗೂ ಇವರಿಗೂ ಜಗಳವಾಗುತ್ತಿದ್ದುವು.
	
ಹತ್ತೊಂಬತ್ತನೆಯ ಶತಮಾನದವರೆಗೆ ಬುನ್ಯೋರೊ-ಕಿಟಾರ ರಾಜ್ಯ ದಕ್ಷಿಣದ ಉಳಿದೆಲ್ಲ ರಾಜ್ಯಗಳಿಗಿಂತ ಅತ್ಯಂತ ಪ್ರಬಲವಾಗಿತ್ತು. ಅದು ತೀರ ಬೆಳೆದು, ಕೊನೆಗೆ ತನ್ನ ಭಾರದಿಂದ ತಾನೇ ಕುಸಿಯಿತು. ಬುನ್ಯೋರೋ-ಕಿಟಾರದ ಆಗ್ನೇಯಕ್ಕಿದ್ದ ಪುಟ್ಟ ರಾಜ್ಯ ಉಗಾಂಡ ಕ್ರಮೇಣ ಪ್ರಬಲವಾಗಿ ನೆರೆ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಉಗಾಂಡದ ಉಚ್ಛ್ರಾಯ ಕಾಲದಲ್ಲಿ ಇಲ್ಲಿಗೆ ಬಂದವರು ಅರಬ್ಬೀ ಜನ ದಂತ ಹಾಗೂ ಗುಲಾಮೀ ವ್ಯಾಪಾರ ಇವರ ಪ್ರಧಾನ ಉದ್ದೇಶ. ಐರೋಪ್ಯ ಸಾಹಸಿಗಳೂ ಸಂಶೋಧಕರೂ ಅನಂತರ ಬಂದರು. ಈ ವೇಳೆಗೆ ಈಜಿಪ್ಟ್ ನೈಲ್‍ನದಿಯ ಉದ್ದಕ್ಕೂ ತನ್ನ ಪ್ರಾಬಲ್ಯ ಬೆಳೆಸಿಕೊಂಡಿತ್ತು. 
	
ಐರೋಪ್ಯ ಕ್ರೈಸ್ತ ಪಾದ್ರಿಗಳ ಮೊದಲ ತಂಡ ಉಗಾಂಡಕ್ಕೆ ಬಂದದ್ದು 1877ರಲ್ಲಿ. ಇವರು ಇಲ್ಲಿನ ರಾಜಕೀಯದಲ್ಲೂ ಕೈಹಾಕಲಾರಂಭಿಸಿದರು. ಸಾಮ್ರಾಜ್ಯಷಾಹಿ ಜರ್ಮನರಿಗೂ ಇಂಗ್ಲಿಷರಿಗೂ ನಡುವೆ ಸ್ಪರ್ಧೆ ಏರ್ಪಟ್ಟಿತು. 1890ರಲ್ಲಿ ಇವರ ನಡುವೆ ಏರ್ಪಟ್ಟ ಒಪ್ಪಂದದ ಪ್ರಕಾರ ದಕ್ಷಿಣ ಅಕ್ಷಾಂಶ 1(. ಯ ಉತ್ತರಕ್ಕಿರುವ ಪ್ರದೇಶದಲ್ಲಿ ಬ್ರಿಟಿಷ್ ಪ್ರಭಾವವಲಯದೊಳಕ್ಕೆ ಬರತಕ್ಕದ್ದೆಂದಾಯಿತು. ಬ್ರಿಟಿಷ್ ಸರ್ಕಾರದ ಪರವಾಗಿ ಈ ಪ್ರದೇಶದ ಆಡಳಿತ ನಿರ್ವಹಿಸುವ ಹೊಣೆ ಹೊತ್ತ ಸಂಸ್ಥೆಯೇ ಬ್ರಿಟಿಷ್ ಈಸ್ಟ್ ಆಫ್ರಿಕ ಕಂಪನಿ. ಈ ಕಂಪನಿಯ ಪ್ರತಿನಿಧಿಯಾದ ಕ್ಯಾಪ್ಟನ್ ಲೂಗಾರ್ಡ್ ಈ ಪ್ರದೇಶದ ಮುಖಂಡರುಗಳೊಡನೆ ಕ್ರಮೇಣ ಒಪ್ಪಂದಮಾಡಿಕೊಂಡು ಇವನ್ನೆಲ್ಲ ತನ್ನ ಕಂಪನಿಯ ರಕ್ಷಣೆಯ ಕಕ್ಷೆಯೊಳಕ್ಕೆ ಸೇರಿಸಿಕೊಂಡ. ಆದರೆ ಹಣದ ಅಭಾವದಿಂದ ಈ ಕಂಪನಿ ತನ್ನ ಹೊಣೆ ನಿರ್ವಹಿಸಲಾರದೆ ಹೋಯಿತು. ಬ್ರಿಟಿಷ್ ಸರ್ಕಾರ ಈ ಆಯಕಟ್ಟಿನ ಪ್ರದೇಶವನ್ನು ಬಿಟ್ಟುಕೊಡಲೊಲ್ಲದೆ 1894ರಲ್ಲಿ ತಾನೇ ಇದರ ರಕ್ಷಣೆಯ ಭಾರ ಹೊತ್ತುಕೊಂಡಿತು.
	
ಈ ಪ್ರದೇಶದಲ್ಲಿ ಆಗ ಅನೇಕ ಛಿದ್ರಕಾರಕ ಪ್ರವೃತ್ತಿಗಳಿದ್ದುವು. ಅಲ್ಲದೆ ಬ್ರಿಟಿಷ್ ಆಡಳಿತಗಾರರ ವಿರುದ್ಧ ಇದ್ದ ಅಸಮಾಧಾನವೂ ವಿಪರೀತ. ದಂಗೆಗಳು ಸಾಮಾನ್ಯವಾಗಿದ್ದುವು.
	
ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಬ್ರಿಟಿಷ್ ಸರ್ಕಾರ ಈ ಪ್ರದೇಶದ ಮುಖ್ಯ ವಿಭಾಗಗಳ ನಾಯಕರೊಂದಿಗೆ ಕರಾರು ಮಾಡಿಕೊಂಡಿತು. ಅವರು ಬ್ರಿಟಿಷರಲ್ಲಿ ನಿಷ್ಠೆ ತೋರುತ್ತಿರುವವರೆಗೂ ಅಧಿಕಾರ ರಕ್ಷಿಸುವುದಾಗಿ ಬ್ರಿಟಿಷ್ ಸರ್ಕಾರ ಭರವಸೆ ನೀಡಲಾಗಿ ಇಲ್ಲಿ ವಾತಾವರಣ ಸ್ವಲ್ಪ ಸುಧಾರಿಸಿತು.
	
ಇಪ್ಪತ್ತನೆಯ ಶತಮಾನದಲ್ಲಿ ಉಗಾಂಡದ ಆರ್ಥಿಕ ಬೆಳೆವಣಿಗೆ ಸಾಧ್ಯವಾದದ್ದು ತೋಟದ ಉದ್ಯಮದಿಂದ. ಅನೇಕ ಮಂದಿ ಐರೋಪ್ಯರು ಇಲ್ಲಿಗೆ ಬಂದು ನೆಲ ಪಡೆದು ಬೆಳೆ ತೆಗೆಯಲಾರಂಭಿಸಿದರು. ಈ ಕಾಲದ ಒಂದು ಮುಖ್ಯ ರಾಜಕೀಯ ಪ್ರಗತಿಯೆಂದರೆ 1921ರಲ್ಲಿ ಇಲ್ಲಿ ಸ್ಥಾಪಿತವಾದ ವಿಧಾನಪರಿಷತ್ತು. ಆದರೆ ಇದರ ಪ್ರಾತಿನಿಧ್ಯ ತೀರ ಸಂಕುಚಿತವಾಗಿದ್ದರಿಂದ ಇದು ದೇಶದ ಮೇಲೆ ಬೀರಿದ ಪ್ರಭಾವ ಅತ್ಯಲ್ಪ. ಇಲ್ಲಿನ ವಾಣಿಜ್ಯ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತಿದ್ದವರೆಂದರೆ ಭಾರತೀಯರು. ಐರೋಪ್ಯರಿಗಿದ್ದಷ್ಟೇ ಪ್ರಾತಿನಿಧ್ಯ ಇವರಿಗೆ ದೊರಕಿರಲಿಲ್ಲ. ಆದ್ದರಿಂದ ಇವರು ಅಸಮಾಧಾನಗೊಂಡರು. ಆಫ್ರಿಕನ್ನರಲ್ಲಿ ಮಾತ್ರ ಸಾಕಷ್ಟು ಜಾಗ್ರತೆಯೇ ಇನ್ನೂ ಉದ್ಭ್ಬವಿಸಿರಲಿಲ್ಲ. ಬುಗಾಂಡದ ಜನ ರಾಜಕೀಯವಾಗಿ ಸ್ವಲ್ಪ ಮುಂದುವರೆದಿದ್ದರಾದರೂ ಅವರಿಗೆ ಅವರದೇ ಆದ ಸಭೆ ಇದ್ದದ್ದರಿಂದ ಇಡೀ ಉಗಾಂಡದ ವಿಧಾನ ಪರಿಷತ್ತಿನಲ್ಲಿ ಅವರಿಗೆ ಆಸಕ್ತಿಯಿರಲಿಲ್ಲ. ಈ ಪ್ರದೇಶದ ನಾನಾ ಭಾಗಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ಅವರು ಸ್ವಾಗತಿಸಲಿಲ್ಲ. 
	
ದ್ವಿತೀಯ ಮಹಾಯುದ್ಧಕಾಲದಲ್ಲಿ ಹೊರನಾಡಿಗಳೊಂದಿಗೆ ವ್ಯಾಪಾರಕ್ಕೆ ತಡೆಬಿದ್ದದ್ದರಿಂದ ಉಗಾಂಡ ಸ್ವಯಂಪೂರ್ಣತೆ ಸಾಧಿಸಲು ಕ್ರಮಕೈಕೊಳ್ಳಬೇಕಾಯಿತು. ದೇಶದಲ್ಲಿ ಹೆಚ್ಚುತ್ತಿದ್ದ ಜಾಗೃತಿಗೆ ಅನುಸಾರವಾಗಿ 1945ರಲ್ಲಿ ಪ್ರಥಮ ಬಾರಿಗೆ ಇಲ್ಲಿನ ದೇಶೀಯರು ವಿಧಾನಪರಿಷತ್ತಿಗೆ ನಾಮಕರಣ ಪಡೆದರು. ಇವರ ಸಂಖ್ಯೆ ಕ್ರಮೇಣ ಹೆಚ್ಚಿತು. 1955ರಲ್ಲಿ ಮಂತ್ರಿಮಂಡಳಿಗೆ ಖಾಸಗಿ ಪ್ರತಿನಿಧಿಗಳನ್ನೂ ಸೇರಿಸಿಕೊಂಡಿದ್ದು ಈ ದೇಶದ ರಾಜಕೀಯ ಬೆಳವಣಿಗೆಯ ಇತಿಹಾಸದಲ್ಲಿ ಇನ್ನೊಂದು ಮುಖ್ಯ ಘಟನೆ. 
	
ಕ್ರಮೇಣ ಉಗಾಂಡದ ಜನರಲ್ಲಿ ಸ್ವಾತಂತ್ರ್ಯಪ್ರೇಮ ಬೆಳೆಯಿತು. ಕೆಲವು ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. 1962ರ ಅಕ್ಟೋಬರ್ 9ರಂದು ಉಗಾಂಡ ಸ್ವತಂತ್ರವಾಯಿತು. ಕಬಕ ಮುಟೇಸ ಉಗಾಂಡದ ಪ್ರಥಮ ಅಧ್ಯಕ್ಷ: ಮಿಲ್ಟನ್ ಓಬೋಟೆ ಪ್ರಧಾನಮಂತ್ರಿ.
 
1966ರ ಫೆಬ್ರವರಿಯಲ್ಲಿ ಓಬೋಟೆ ಸಂವಿಧಾನವನ್ನು ರದ್ದುಗೊಳಿಸಿ ಸಂಪೂರ್ಣ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡ. ಕಬಕ ಮುಟೇಸ ಇಂಗ್ಲೆಂಡಿಗೆ ಓಡಿಹೋದ. ಉಗಾಂಡದಲ್ಲಿ ದಂಗೆ ಉಂಟಾದಾಗ ಓಬೋಟೆ ಅದನ್ನು ಹತ್ತಿಕ್ಕಿ, ಒಂದು ಹೊಸ ಸಂವಿಧಾನವನ್ನು ಜಾರಿಗೆ ತಂದು, ಹಿಂದಿದ್ದ ಸಂಯುಕ್ತ ರಾಷ್ಟ್ರ ಸಂವಿಧಾನವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ. 1967ರಲ್ಲಿ ಅದರ ಸ್ಥಾನದಲ್ಲಿ ಹೊಸ ಸಂವಿಧಾನ ಜಾರಿಗೆ ಬಂತು. ಈ ಸಂವಿಧಾನದ ಪ್ರಕಾರ ಓಬೋಟೆ ಉಗಾಂಡದ ಅಧ್ಯಕ್ಷನಾದ. ಉಗಾಂಡದಲ್ಲಿದ್ದ ಪಾಳೆಗಾರರ ಅಧಿಕಾರವನ್ನೆಲ್ಲ ರದ್ದುಪಡಿಸಲಾಯಿತು. 				   
   
(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ